ಅಮರಾವತಿ : ಕುರುಡು ಕಾಂಚಾಣ ಕುಣಿಯುತ್ತಲಿದೆ ಕಾಲಿಗೆ ಬಿದ್ದವರ ತುಳಿಯುತ್ತಲಿದೆ


ಹಲವು ವರ್ಷಗಳಿಂದ ಇರುವ ಸಾಮಾಜಿಕ ಸಮಸ್ಯೆಯೊಂದನ್ನು ಅದ್ಭುತ ಕಥೆಯ ಮೂಲಕ ಹೇಳಿರುವ ಪ್ರಯತ್ನವೇ “ಅಮರಾವತಿ”. ಕಳೆದ ಒಂದು ವಾರದಲ್ಲಿ ಅನೇಕ ಅಂತಾರಾಷ್ಟ್ರೀಯ ಚಿತ್ರಗಳನ್ನು ನೋಡಿ ನಮ್ಮಲ್ಲಿ ಏಕೆ ಇಂತಹ ಚಿತ್ರಗಳು ಕಾಣಿಸಿಕೊಳ್ಳುವುದಿಲ್ಲ!? ಎಂದು ನನ್ನನ್ನು ನಾನು ಪ್ರಶ್ನಿಸಿಕೊಂಡಿದ್ದುಂಟು. ಅದಕ್ಕೆ ಉತ್ತರವನ್ನು ಬಿ ಎಂ ಗಿರಿರಾಜ್ 'ಅಮರಾವತಿ' ಮೂಲಕ ನೀಡಿದ್ದಾರೆ. 'ಅಮರಾವತಿ' ಗಟ್ಟಿ ಕಥೆಯುಳ್ಳ, ಪಾತ್ರಗಳು ತುರುಕಿದಂತೆ ಕಾಣದೆ ಕಥೆಯೊಳಗೆ ತಾನೇ ತಾನಾಗಿ ಅರಳಿದ ರೀತಿ ಗಿರಿರಾಜ್ ಅವರ ಯಶಸ್ಸಿಗೆ ಸಾಕ್ಷಿ. ನಾವು ದಿನಪತ್ರಿಕೆಗಳಲ್ಲಿ ಓದುವ ಮತ್ತು ದಿನ ನಿತ್ಯ ತುಳಿತಕ್ಕೆ ಒಳಗಾದವರ ಕಥೆ ಇದು. ಪಾತ್ರಗಳ ನೇಯ್ಗೆಯಲಿ ಗಿರಿರಾಜ್ ವಹಿಸಿರುವ ಮುತುವರ್ಜಿ ಎದ್ದು ಕಾಣುತ್ತದೆ. ಚಿತ್ರದಲ್ಲಿ ಬರುವ “ದೇವರು” ಪಾತ್ರದಾರಿ ಮತ್ತು ನಾಯಿ ಇದಕ್ಕೆ ಒಳ್ಳೆಯ ಉದಾಹರಣೆಗಳು. ಅಚ್ಯುತ್ ಕುಮಾರ್ – ಈ ಚಿತ್ರದಲ್ಲಿ ತಮ್ಮ ಅದ್ಭುತ ನಟನೆಯ “ಚಟ”ವನ್ನು ಮುಂದುವರೆಸಿದ್ದಾರೆ. ಚಿತ್ರದುದ್ದಕ್ಕೂ ಇವರೇ ಸ್ಟಾಂಡ್ ಔಟ್ ಪರ್ಫಾರ್ಮರ್. ತಮ್ಮ ಕೊನೆಯ ಮಗನ ಮೇಲಿರುವ ಪ್ರೀತಿ ಮತ್ತು ಅವನಿಗಾಗಿ ಮಾಡುವು ತ್ಯಾಗಗಳು ಮಾನವೀಯತೆಯನ್ನು ತೋರಿಸುತ್ತದೆ. ಪಾತ್ರಕ್ಕೆ ಬೇಕಿರುವ ರಕ್ಕಸ ನಟನೆಯ ಮೂಲಕವೂ ಗಮನ ಸೆಳೆಯುತ್ತಾರೆ. ನನಗೆ ತಿಳಿದಿರುವ ಮತ್ತು ನನ್ನ ಮಿತ್ರವೃಂದದಲ್ಲೇ ಇಂತಹ ಸಮಸ್ಯೆಗಳನ್ನು ಎದುರುಸಿದವರನ್ನು ಕಂಡಿದ್ದೇನೆ. ಬಡತನ, ಅಸಹಾಯಕತೆ, ಅನಕ್ಷರತೆ, ಸಮಾಜದ ತಿರಸ್ಕಾರ, ತಾರತಮ್ಯ, ಹೆಜ್ಜೆ ಹೆಜ್ಜೆಗೂ ಸವಾಲುಗಳು – ಇಂತಹ ವಿಷಯಗಳಿಗೆ ಜೀವ ನೀಡಿದ್ದಾರೆ ಗಿರಿರಾಜ್. ಪ್ರಾಮಾಣಿಕತೆ ಮತ್ತು ಕಷ್ಟಪಟ್ಟು ದುಡಿಯುವ ಗುಣವಿದ್ದರೂ ಅದನ್ನು ಬೆಂಬಲಿಸದ ಜನರನ್ನು ಚಿತ್ರದಲ್ಲಿ ಕಾಣಬಹುದು. ಪೌರಕಾರ್ಮಿಕರು ಅನುಭವಿಸುವ ಮಾನಸಿಕ ತುಮುಲಗಳನ್ನು ನಿರ್ದೇಶಕರು ಮತ್ತು ನಟರು ಸುಂದರವಾಗಿ ಹೊರತಂದಿದ್ದಾರೆ. ಇಡೀ ಚಿತ್ರ ಪ್ರೇಕ್ಷಕನನ್ನು ಆವರಿಸಿಕೊಳುತ್ತ ಹೋಗುತ್ತದೆ. ಚಿತ್ರದ ಮೊದಲಾರ್ಧಕ್ಕೆ ವೇಗವಿದೆ, ದ್ವಿತೀಯಾರ್ಧದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಹೋರಾಟದ ಗುಣವಿದೆ. ಕನ್ನಡಲ್ಲಿ ಒಳ್ಳೆಯ ಚಿತ್ರಗಳು ಬರುತ್ತಿರುವ ಕಾಲವಿದು. ಈ ಪಟ್ಟಿಗೆ ಹೊಸ ಸೇರ್ಪಡೆ 'ಅಮರಾವತಿ'. ಸಮಸ್ಯೆಗಳು ಮತ್ತು ಅದರೊಳಗೆ ಅಡಕವಾಗಿರುವ ಮತ್ತಷ್ಟು ಸಮಸ್ಯೆಗಳು, ಈ ಸಮಸ್ಯೆಗಳನ್ನು ಕಂಡು ಕಾಣದಂತಿರುವ ಜನ, ಪರಿಹಾರ – ಇಷ್ಟನ್ನು ಗಿರಿರಾಜ್ ಕಟ್ಟಿಕೊಟ್ಟಿದ್ದಾರೆ. ಅವರ ಈ ಪ್ರಯತ್ನ ಪ್ರಶಂಸನೀಯ ಮತ್ತು ಶ್ಲಾಘನೀಯ.

Leave a comment


Please note, comments must be approved before they are published